ದೈವೀಸಂಪತ್ತು
	ಮನುಷ್ಯನಲ್ಲಿ ಅಳವಡಿಸಿಕೊಳ್ಳಲು ಬರುವ 26 ಸದ್ಗುಣಗಳನ್ನು ದೈವೀಸಂಪತ್ತು ಎನ್ನಲಾಗಿದೆ, ಮನುಷ್ಯ ಅವುಗಳಿಂದ ದೇವ ಸಮಾನನಾಗುವನೆಂಬ ತಾತ್ಪರ್ಯದಿಂದ, ಅಭಯ, ಸಾತ್ತ್ವಿಕ ಮನಸ್ಸು, ಜ್ಞಾನಯೋಗ ಮತ್ತು ಕರ್ಮಯೋಗಗಳಲ್ಲಿ ನಿಷ್ಠೆ, ದಾನ, ಜಿತೇಂದ್ರಿಯತ್ವ, ಯಜ್ಞ ನಿಷ್ಠೆ, ಅಧ್ಯಯನ, ತಪಸ್ಸು, ಕೌಟಿಲ್ಯವಿಲ್ಲದಿರುವುದು, ಅಹಿಂಸೆ, ಸತ್ಯ, ಅಕ್ರೋಧ, ತ್ಯಾಗ, ಶಾಂತಿ, ಚಾಡಿಕೋರತನವಿಲ್ಲದಿರುವುದು, ದಯೆ, ಪ್ರಾಣಿದಯೆ, ಮಾರ್ದವ, ವಿನೀತಭಾವ, ಚಾಪಲ್ಯವಿಲ್ಲದಿರುವುದು, ತೇಜಸ್ಸು, ಕ್ಷಮೆ, ಧೃತಿ, ಶೌಚ, ಅದ್ರೋಹ, ಗರ್ವದ ಅಭಾವ - ಈ ಇಪ್ಪತ್ತಾರೂ ದೈವೀಸ್ವಭಾವದ ದ್ಯೋತಕಗಳು.  ಈ ಗುಣಗಳ ವಿವರಣೆ ಮಹಾಭಾರತದ ಶಾಂತಿಪರ್ವದ 160 - 163 ನೆಯ ಅಧ್ಯಾಯಗಳಲ್ಲಿಯೂ ಬರುತ್ತದೆ.  ಧರ್ಮಪದದ 87, 88 ನೆಯ ಶ್ಲೋಕಗಳಲ್ಲಿಯೂ ಇವುಗಳಲ್ಲಿ ಕೆಲವನ್ನು ಎತ್ತಿ ಹಿಡಿಯಲಾಗಿದೆ.  ದೈವೀಸಂಪತ್ತು ಅಥವಾ ಸ್ವಭಾವ ಯಾರಿಗೆ ಮೈಗೂಡುತ್ತದೋ ಅವರು ಮೋಕ್ಷವನ್ನು ಸುಲಭವಾಗಿ ಗಳಿಸುತ್ತಾರೆಂದು ಭಗವದ್ಗೀತೆ ಸ್ಪಷ್ಟವಾಗಿ ಆಶ್ವಾಸನೆ ನೀಡುತ್ತದೆ.  ಇದಕ್ಕೆ ವಿರುದ್ಧವಾದ ಗುಣಗಳ ಸ್ವಭಾವವೇ ಅಸುರೀ ಸಂಪತ್ತೆನಿಸುತ್ತದೆ.  ಭಗವದ್ಗೀತೆಯ 16 ನೆಯ ಅಧ್ಯಾಯದಲ್ಲಿ ಈ ಎರಡೂ ಸಂಪತ್ತುಗಳ ಪ್ರಸ್ತಾಪ ವಿವರವಾಗಿ ಬಂದಿದೆ.
(ಕೆ.ಕೆ.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ